Thursday, October 15, 2015

ಅಳುವ ಕಡಲೊಳು ತೇಲಿ ಬರುತಲಿದೆ

ಅಳುವ ಕಡಲೊಳು ತೇಲಿ ಬರುತಲಿದೆ / Aluva kadalolu teli barutalide

ಅಳುವ ಕಡಲೊಳು ತೇಲಿ ಬರುತಲಿದೆ
      ನಗೆಯ ಹಾಯಿ ದೋಣಿ |
ಬಾಳ ಗಂಗೆಯ ಮಹಾ ಪೂರದೊಳು
      ಸಾವಿನೊಂದು ವೇಣಿ ||

ನೆರೆತಿದೆ ಬೆರೆತಿದೆ ಕುಣಿವ ಮೊರೆವ
      ತೆರೆ ತೆರೆಗಳೋಳಿಯಲ್ಲಿ |
ಜನನ ಮರಣಗಳ ಉಬ್ಬುತಗ್ಗು ಹೊರ
      ಳುರುಳುವಾಟವಲ್ಲಿ ||

ಆಶೆ ಬೂದಿ ತಳದಲ್ಲು ಕೆರಳುತಿವೆ
      ಕಡಿಗಳೆನಿತೋ ಮರಳಿ |
ಮುರಿದು ಬಿದ್ದ ಮನ ಮರದ ಕೊರಡೊಳು
      ಹೂವು ಅರಳಿ ಅರಳಿ  ||

ಕೂಡಲಾರದೆದೆಯಾಳದಲ್ಲೂ
 ಕಂಡಿತು ಏಕಸೂತ್ರ
ಕಂಡುದುಂಟು ಬೆಸೆದೆದೆಗಳಲ್ಲೂ
ಬಿನ್ನತೆಯ ವಿಕಟಹಾಸ್ಯ ।।

ಎತ್ತರೆತ್ತರಕೆ ಏರುವ ಮನಕು
ಕೆಸರ ಲೇಪ ಲೇಪ।
ಹೊಳೆಯ ಕೊಳಚೆಯಲಿ ಮುಳುಗಿ ಕಂಡೆನೋ
ಬಾನಿನೊಂದು ಪೆಂಪ।।

ತುಮ್ಬುಗತ್ತಲಿನೆ ಬಸಿರನಾಳುತಿದೆ
ಒಂದು ಅಗ್ನಿ ಪಿಂಡ।
ತಮದ ಘಾದ ಹೊನಲಲ್ಲು ಹೊಳೆಯುತಿದೆ ಸತ್ವ ಒಂದ ಕಂಡ

ಆಶೆಯೆಂಬ ತಳವೊಡೆದ ದೋಣಿಯಲಿ
      ದೂರತೀರಯಾನ |
ಯಾರ ಲೀಲೆಗೋ ಯಾರೋ ಏನೋ ಗುರಿ
      ಯಿರದೆ ಬಿಟ್ಟ ಬಾಣ ||

ಇದು ಬಾಳು ನೋಡು ಇದ ತಿಳಿದೆನೆಂದರೂ
      ತಿಳಿದ ಧೀರನಿಲ್ಲಿ |
ಹಲವುತನದ ಮೈ ಮರೆಸುವಾತವಿದು
      ನಿಜವು ತೋರದಲ್ಲಿ ||

ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾ
      ವೇಕೊ ಮಲೆತು ಕಲೆತು
ಕೊನೆಗೆ ಕರಗುವೆವು ಮರಣ ತೀರ ಘನ
      ತಿಮಿರದಲ್ಲಿ ಬೆರೆತು ||

                                                         - ಎಂ.ಗೋಪಾಲ ಕೃಷ್ಣ ಅಡಿಗ  

No comments: