Friday, November 2, 2012

My Favorite Lirics


ಮೋಹನ ಮುರಲಿ

ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು, ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ ;

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?

ಯಾವ ಮೋಹನಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

                                                             - ಎಂ. ಗೋಪಾಲಕೃಷ್ಣ ಅಡಿಗ


ಹಾಡುವ ಹಕ್ಕಿಗೆ ಹೂವಿನ ರೆಂಬೆ

ಹಾಡುವ ಹಕ್ಕಿಗೆ ಹೂವಿನ ರೆಂಬೆ
ಕಂದನ ಕೈಗೆ ಬಣ್ಣದ ಗೊಂಬೆ
ಆಶೀರ್ವದಿಸಲಿ ಈ ಹೊಸ ವರ್ಷ
ಪ್ರಾಯದ ಗಂಡಿಗೆ ಪ್ರೀತಿಯ ರಂಭೆ

ಖಾಲಿ ಆಗಸಕೆ ಕಪ್ಪನೆ ಮೋಡ
ಬೆಂದ ಜೀವಕೆ ಬೆಚ್ಚನೆ ಗೂಡ
ಬಾಗಿನ ನೀಡಲಿ ಈ ಹೊಸ ವರ್ಷ
ಕವಿ ಕಲ್ಪನೆಗೆ ಹೊಸ ಹೊಸ ಹಾಡ

ನಲ್ಲಿಯ ಬಾಯಿಗೆ ನಿಲ್ಲದ ನೀರು
ಹೊತ್ತು ಹೊತ್ತಿಗೆ ತಪ್ಪದೆ ಹಾಲು
ಸಿಗುವಂತಾಗಲಿ ಈ ಹೊಸ ವರ್ಷ
ಬಡವರಿಗೂ ಮೈ ತುಂಬಾ ನೂಲು

ಬಿರಿದ ಭೂಮಿಗೆ ಸುರಿಯುವ ಧಾರೆ
ಮಿರಿ ಮಿರಿ ಮಿಂಚಿನ ಗದ್ದೆಯ ಮೋರೆ
ತರುವಂತಾಗಲಿ ಈ ಹೊಸ ವರ್ಷ
ಮೆರೆಯಲಿ ನಾಡಿನ ಭಾಗ್ಯದ ತಾರೆ

                                           - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಹಳೆಯ ಹಾಡು

ಹಾಡು ಹಳೆಯದಾದರೇನು
ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒಂದು ಸಾಧನ.

ಹಳೆಯ ಹಾಡ ಹಾಡು ಮತ್ತೆ
ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು
ಜೀವನವನೆ ಕಟ್ಟುವೆ.

ಹಾಡನೊಲಿದು ಕೇಳುವನಿತು
ತೆರೆದ ಹೃದಯ ನನಗಿದೆ
ಅಷ್ಟೆ ಸಾಕು; ಹಾಡು ನೀನು
ಅದನೆ ಕೇಳಿ ಸುಖಿಸುವೆ.

ಹಮ್ಮು ಬಿಮ್ಮು ಒಂದು ಇಲ್ಲ
ಹಾಡು, ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗ-
ಲೆನ್ನ ಮನವು ಕಾದಿದೆ.

                            - ಜಿ. ಎಸ್. ಶಿವರುದ್ರಪ್ಪ
                              'ಸಾಮಗಾನ'

ತೃಪ್ತಿ 

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ,
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ
                              - ಜಿ.ಎಸ್. ಶಿವರುದ್ರಪ್ಪ
                               'ಸಾಮಗಾನ'

ಸ್ತ್ರೀ

ಆಕಾಶದ ನೀಲಿಯಲ್ಲಿ
ಚಂದ್ರ-ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ -

ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ -

ಮರ ಗಿಡ ಹೂ ಮುಂಗುರಳನು
ತಂಗಾಳಿಯ ಬೆರಳ ಸವರಿ
ಹಕ್ಕಿಗಿಲಕಿ ಹಿಡಿಸಿದಾಕೆ -

ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ-ಮಗುವ ತಬ್ಬಿದಾಕೆ -

ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ?

                        - ಜಿ.ಎಸ್. ಶಿವರುದ್ರಪ್ಪ
                           ' ತೆರೆದ ದಾರಿ '

No comments: