ಎಲ್ಲಿ ಜಾರಿತೋ ಮನವು...
- ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ
ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ||
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ
ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲಿ ಸಾಲ ಮೀಟಿ ಹಳೆಯ ಮಧುರ ನೋವ
ಬಾನಿನಲ್ಲಿ ಒಂಟಿ ತಾರೆ ಸೊನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೊ ನೀರೆ
ಹಿಂದೆ ಯಾವ ಜನ್ಮದಲ್ಲೊ ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ ಹೇಳಲಾರೆ ತಾಳಲಾರೆ
ನೀ ಸಿಗದೇ ಬಾಳೊಂದು...
- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ನೀ ಸಿಗದೇ ಬಾಳೊಂದು ಬಾಳೆ ಕೃಷ್ಣ ||
ನಾ ತಾಳಲಾರೆ ಈ ವಿರಹ ಕೃಷ್ಣ
ಕಮಲವಿಲ್ಲದ ಕೆರೆ ನನ್ನ ಬಾಳು
ಚಂದ್ರ ಇಲ್ಲದ ರಾತ್ರಿ ಬೀಳು
ನೀ ಸಿಗದೇ ಉರಿ ಉರಿ ಕಳೆದೆ ಇರುಳ
ಮಾತಿಲ್ಲ ಬಿಗಿದಿದೆ ದುಃಖ ಕೊರಳ
ಅನ್ನ ಸೇರದು ನಿದ್ದೆ ಬಂದೂದೆಂದು
ಕೂಡಿವೆ ಒಂದೇ ಸಮ ಕೃಷ್ಣ ಎಂದು
ಯಾರು ಅರಿವರು ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ
ಒಳಗಿರುವ ಗಿರಿಧರನೆ ಹೊರಗೆ ಬಾರೊ
ಕಣ್ಣೆದುರು ನಿಂತು ಆ ರೂಪ ತೋರೊ
ಜನುಮ ಜನುಮದ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೇ ಅದರ ರೀತಿ
No comments:
Post a Comment