ನರಸಿಂಹಸ್ವಾಮಿ
ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ರತ್ನದಂತಹ ಹುಡುಗಿ ಊರಿಗೆಲ್ಲ
ಬಲು ಜಾಣೆ ಗಂಭೀರೆ ಹೆಸರು ಸೀತಾದೇವಿ ಹನ್ನೆರಡು ತುಂಬಿಹುದು ಮಧುವೆಯಿಲ್ಲ ||
ತಾಯಿಯಿಲ್ಲದ ಹೆಣ್ಣು ಮಿಂಚ ಬೀರುವ ಕಣ್ಣು ಒಮ್ಮೊಮ್ಮೆ ಕಣ್ಣೀರ ಸರಸಿಯಹುದು
ತಾಯಿಯಂದದಿ ಬಂದು ತಂಪನೆರೆಯುವುದೆಂದು ಇಂಥ ಬಾಳಿಗೆ ಒಲವೆ ನಿನ್ನ ಕನಸು
ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ ಅವಳ ಗಂಡನ ಹೆಸರ ಕೇಳಬೇಕು
ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು ಒಲ್ಲೆನೆಂದಳು ಸೀತೆ ಕೋಣೆಯೊಳಗೆ
ಮಗಳ ಮಾತನು ಕೇಳಿ ನಕ್ಕು ಬಿಟ್ಟರು ತಂದೆ ಒಳಗೆ ನಂದಾದೀಪ ನಂದಿ ಹೋಗಿ
ಫಲವ ನುಡಿದುದು ಹಲ್ಲಿ ಹೇಳಲೇನಿದೆ ಮುಂದೆ ತೆರಳಿದನು ಜೋಯಿಸನು ತಣ್ಣಗಾಗಿ
ಬೆಳಗಾಗ ಕೆರೆಯಬಳಿ ನನ್ನ ತಂಗಿಯ ಕಂಡು ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರ ಕೇರಿಯಲಿ ಬಂದಿದ್ದ ಹೊಸ ಗಂಡು ತನ್ನ ಕೂದಲಿಗಿಂತ ಕಪ್ಪು ಎಂದು
ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು ನೋಡಬೇಕೆ ಇಂಥ ಕಪ್ಪು ಗಂಡು
ಶಾನುಭೋಗರ ಮನೆಯ ತೋರಣವೇ ಹೇಳುವುದು ಬಂದ ದಾರಿಗೆ ಸುಂಕವಿಲ್ಲವೆಂದು
ಶಾನುಭೋಗರ ಮಗಳು ರತ್ನದಂತಹ ಹುಡುಗಿ ಗಂಡು ಸಿಕ್ಕುವುದೊಂದು ಕಷ್ಟವಲ್ಲ
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೇನಂತೆ ನಷ್ಟವಿಲ್ಲ
ದೀಪವು ನಿನ್ನದೆ...
- ಕೆ. ಎಸ್. ನರಸಿಂಹಸ್ವಾಮಿ
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು ||
ಕಡಲು ನಿನ್ನದೆ ಹಡಗು ನಿನ್ನದೆ
ಮುಳುಗದಿರಲಿ ಬದುಕು
ಬೆಟ್ಟವು ನಿನ್ನದೆ ಬಯಲು ನಿನ್ನದೆ
ಹಬ್ಬಿ ನಗಲಿ ಪ್ರೀತಿ
ನೆಳಲೋ ಬಿಸಿಲೋ ಎಲ್ಲವು ನಿನ್ನದೆ
ಇರಲಿ ಏಕರೀತಿ
ಆಗೊಂದು ಸಿಡಿಲು ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ
ಅಲ್ಲಿ ರಣದುಂದುಭಿ ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾಕಾವ್ಯ ಈ ಭಾವಗೀತೆ
ನಿನ್ನ ಪದಧ್ವನಿ
ಸಿರಿಗೆರೆಯ ನೀರಲ್ಲಿ...
- ಕೆ. ಎಸ್. ನರಸಿಂಹಸ್ವಾಮಿ
ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು ||
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು
ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು
ತಾಯ ಮೊಲೆಯಲ್ಲಿ ಕರು ತುಟಿ ಇಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು
ಹೂ ಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು
ಹೊಂಬಾಳೆ ಹೂವಿನಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು
ಮರೆತಾಗ ತುಟಿಗೆ ಬಾರದೆ ಮೋಡ ಮರೆಯೊಳಗೆ ಬೆಳದಿಂಗಳೋ ನಿನ್ನ ಹೆಸರು
ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ ಹೂ ಬಾಣ ನಿನ್ನ ಹೆಸರು
ರಾಯರು ಬಂದರು...
- ಕೆ. ಎಸ್. ನರಸಿಂಹಸ್ವಾಮಿ
ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದೆ ಬಾನಿನ ನಡುವೆ ಚಂದಿರ ಬಂದಿತ್ತು
ತುಂಬಿದ ಚಂದಿರ ಬಂದಿತ್ತು ||
ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ ತಂಬಿಗೆ ಬಂದಿತ್ತು
ಒಳಗಡೆ ದೀಪದ ಬೆಳಕಿತ್ತು
ಘಮ ಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು
ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ ರಾಯರ ಕರೆದಿತ್ತು
ಭೂಮಿಗೆ ಸ್ವರ್ಗವೆ ಇಳಿದಿತ್ತು
ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು
ಅಪ್ಪಟ ರೇಸಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು
ಪದುಮಳು ಹಾಕಿದ ಹೂವಿತ್ತು
ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗು ನಗುತಾ
ಬಿಸಿ ಬಿಸಿ ಹಾಲಿನ ಬಟ್ಟಲ ತಂದರು ಅಕ್ಕರೆಯಲಿ ಮಾವ
ಮಡದಿಯ ಸದ್ದೇ ಇರಲಿಲ್ಲ
ಮಡದಿಯ ತಂಗಿಯ ಕರೆದಿಂತೆಂದರು "ಅಕ್ಕನ ಕರೆಯಮ್ಮ"
ಮೆಲು ದನಿಯಲಿ ನಾದಿನಿ ಇಂತೆಂದಳು "ಪದುಮಳು ಒಳಗಿಲ್ಲ"
ನಕ್ಕಳು ರಾಯರು ನಗಲಿಲ್ಲ
ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ
ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ
ಪದುಮಳ ಬಳೆಗಳ ದನಿ ಇಲ್ಲ
ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ
ಒಳಮನೆಯಲಿ "ನೀರಾಯಿತು" ಎಂದಳು ನಾದಿನಿ ರಾಗದಲಿ
"ಯಾರಿಗೆ" ಎನ್ನಲು ಹರುಷದಲಿ
ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ...
- ಕೆ.ಎಸ್. ನರಸಿಂಹಸ್ವಾಮಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನದದೆ ಕೋಟಿ ರುಪಾಯಿ
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ ||
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ ನನಗಿಲ್ಲದ ಕೋಪ
ಕೈ ಹಿಡಿದವಳು ಕೈ ಬಿಡದವಳು ಮಾಡಿದ ಅಡಿಗೆಯೇ ಚಂದ
ನಾಗರ ಕುಚ್ಚಿನ ನಿಲು ಜಡೆಯವಳು ಈಕೆ ಬಂದುದೆಲ್ಲಿಂದ ?
ಕಬ್ಬಿಗನೂರಿನ ಅರಮನೆಯಿಂದ ಕನಸೇ ಇರಬೇಕು
ಅಲ್ಲಿಯ ದೊರೆತನ ಸಿಗುವಂತಿದ್ದರೆ ನನಗೇ ಸಿಗಬೇಕು
ತಾರೆಯ ಬೆಳಕಿನ ತುಂಬಿದ ಸಭೆಯಲಿ ಸುಂದರಿ ಮೆರೆದಾಳು
ನನ್ನೋಡನವಳು ಸಿಂಹಾಸನದಲಿ ಮೆಲ್ಲನೆ ನಕ್ಕಾಳು
ಚಂದಿರನೂರಿನ ಅರಮನೆಯಿಂದ ಬಂದವರೀಗೆಲ್ಲಿ ?
ಬೆಳ್ಳಿಯ ಕೋಟೆಯ ಬಾಗಿಲಿನಿಂದ ಬಂದವರೀಗೆಲ್ಲಿ ?
ಹೆಂಡತಿಯೊಂದಿಗೆ ಬಡತನ ದೊರೆತನ ಏನೂ ಭಯವಿಲ್ಲ
ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ
ತೌರ ಸುಖದೊಳಗೆನ್ನ...
- ಕೆ. ಎಸ್. ನರಸಿಂಹ ಸ್ವಾಮಿ
ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು ||
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು
ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಲಸಿ ಕೃಷ್ಣ ತುಲಸಿ
ನೀಲಾಂಬರದ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ
ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು
ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ
ಐದು ತಿಂಗಳ ಕಂದ ನಗುತಲಿಹುದು
ಕಣ್ಣೆದುರಿಗಿರುವಾಗ ನಿಮ್ಮ ಮನವುಕ್ಕುವುದು
ಕ್ಷೀರ ಸಾಗರದಂತೆ ಶಾಂತಿಯೊಳಗೆ
ಕಣ್ಣ ಮರೆಯಾದಾಗ ಹೂವೆಲ್ಲ ಹಾವೆಂದು
ಬಿರು ನುಡಿಯನಾಡುವುದು ನಿಮಗೆ ತರವೆ?
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೇನೆ ನಾನು ಇಲ್ಲೇ?
ಸೋಬಲಕ್ಕಿಯನಿಟ್ಟು ಹೂಮುಡಿಸಿ ಕಳುಹುವರು
ಕಂದನಿಗೆ ಹೊಸ ಜರಿಯ ಲಂಗವುಡಿಸಿ
ತಂದೆಯವರೇ ಬಂದು ತಪ್ಪಾಯಿತೆನ್ನುವರು
ಹೆಣ್ಣ ಹೆತ್ತವರನ್ನು ದೂರಬೇಡಿ
ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದಲಿ
ಅಚ್ಚಮಲ್ಲಿಗೆಯರಳು ಬಿರಿಯುತಿಹುದು
ಬಂದುಬಿಡುವೆನು ಬೇಗ ಮುನಿಯದಿರಿ ಕೊರಗದಿರಿ
ಚುಚ್ಚದಿರಿ ಮೊನೆಯಾದ ಮಾತನೆಸೆದು
No comments:
Post a Comment