Thursday, January 31, 2013

ಜಿ. ಎಸ್. ಶಿವರುದ್ರಪ್ಪ...ಎದೆ ತುಂಬಿ ಹಾಡಿದೆನು...

ಎದೆ ತುಂಬಿ ಹಾಡಿದೆನು...

- ಜಿ. ಎಸ್. ಶಿವರುದ್ರಪ್ಪ

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು||

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ

ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ
ಹಾಡು ಹಳೆಯದಾದರೇನು...

- ಜಿ. ಎಸ್. ಶಿವರುದ್ರಪ್ಪ

ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುಹುದಕೆ ಭಾಷೆ ಒರಟು ಯಾನ ||

ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ
ಎಲ್ಲೋ ಹುಡುಕಿದೆ...

- ಜಿ. ಎಸ್. ಶಿವರುದ್ರಪ್ಪ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ ||
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲ ಇವೆ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿ ಇದೆ ನಾಲಿಗೆಗೆ

ಹತ್ತಿರವಿದ್ದು ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೊ ಹೊಂದಿಕೆ ಎಂಬುದು
ನಾಲ್ಕು ದಿನದ ಬದುಕಿನಲಿ

No comments: